ಹಿರಿಯ ನಟಿ ಲೀಲಾವತಿ ಅವರ ಕುಟುಂಬದಿಂದ ಸೋಲದೇವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಡಾ. ಎಂ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿನ್ನೆ ( ಸೆಪ್ಟೆಂಬರ್ 28) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, “ಸರ್ಕಾರವು ಈ ವರ್ಷ ತಲಾ 7-8 ಕೋಟಿ ರೂಪಾಯಿ ವೆಚ್ಚದಲ್ಲಿ 100 ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ 71 ಪ್ರಾಥಮಿಕ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.
60 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ, ತೊಂದರೆಗಳು ಕಂಡು ಬಂದಲ್ಲಿ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ನೀಡುವ ಕ್ರಮವನ್ನು ಕೈಗೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣು ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಕಿವುಡರಿಗೆ ಕಾಕ್ಲಿಯರ್ ಇಂಪ್ಲಾಂಟ್ ವೆಚ್ಚವನ್ನು ಸರ್ಕಾರವು ಭರಸುವ ಯೋಜನೆಯನ್ನು ಜಾರಿಗೊಳಿಸಲಾ ಗಿದೆ.
ಕ್ಯಾನ್ಸರ್ ಹಾಗೂ ಕಿಡ್ನಿ ತೊಂದರೆ ಇರುವವರಿಗೆ ಕಿಮೋ ಹಾಗೂ ಡಯಾಲಿಸ್ ಕೊಡುವುದನ್ನು ಎರಡು ಪಟ್ಟಿನಷ್ಟು ಹೆಚ್ಚಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸಗಳು ಸಚಿವ. ಡಾ. ಸುಧಾಕರ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿದೆ” ಎಂದಿದ್ದಾರೆ.
” ಸೋಲದೇವನಹಳ್ಳಿಯಂತಹ ನಿಸರ್ಗ ಸೌಂದರ್ಯವಿರುವ ಈ ಪುಣ್ಯಭೂಮಿಯಲ್ಲಿ ನೆಲೆಸಿರುವ ಲೀಲಾವತಿಯವರೇ ಧನ್ಯರು. ಲೀಲಾವತಿಯವರ ಚಲನಚಿತ್ರ ನೋಡದೇ ಇರುವವರು ಕರ್ನಾಟಕದಲ್ಲಿ ಯಾರು ಇಲ್ಲ ಎಂಬುದು ನನ್ನ ಭಾವನೆ. ಚಲನಚಿತ್ರದಲ್ಲಿ ತಾರೆಯಾಗಿ ಬಹುದಿನ ಉಳಿಯೋದು ಬಹಳ ಕಷ್ಟ. ಅಂತಹದರಲ್ಲಿ ಲೀಲಾವತಿಯವರು ದಶಕಗಳ ಕಾಲ ಚಿತ್ರರಂಗ ಆಳಿದ್ದಾರೆ. ಅದರ ಜೊತೆಗೆ, ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಂತಿರುವ ಅಕ್ಕ ಲೀಲಕ್ಕ. ಆರ್ಎಂವಿ ಲೇಔಟ್ ತೊರೆದು ಬಂದು ಸ್ವಚ್ಚ ಪರಿಸರದಲ್ಲಿ ಇದ್ದಾರೆ. ಲೀಲಾವತಿ ಅವರು ಇಲ್ಲಿಗೆ ಬಂದಾಗ ನೆಲ ಸಮತಟ್ಟು ಇರಲಿಲ್ಲ, ಈಗ ತೋಟ ಮಾಡಿದ್ದಾರೆ. ನೆಲ ಸಮತಟ್ಟು ಇಲ್ಲದಿದ್ದರೇನು? ಮನಸು ಸಮತಟ್ಟು ಇರಬೇಕು. ಅಕ್ಕನವರು ತಾವು ಚಿತ್ರರಂಗಕ್ಕೆ ಬಂದಾಗ ಬ್ಯೂಟಿ ಕ್ವೀನ್ ಆಗಿದ್ದರು. ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಇನ್ನೂ ಕೆಲವರು ಇದ್ದಾರೆ, ಅವರನ್ನ ಕಳುಹಿಸಿ ನಾನು ಹೋಗುತ್ತೇನೆ, ಸೆಂಚುರಿ ಮಾಡಿ ಹೋಗುತ್ತೇನೆ ಅಂತಾರೆ ಲೀಲಕ್ಕ. ನಿಮಗೆ ಇಷ್ಟೆಲ್ಲ ಅಂದ ಚಂದ ಇದೆ, ಅದಕ್ಕೂ ದೊಡ್ಡದು ನಿಮ್ಮ ಹೃದಯ ವಿಶಾಲತೆ . ಸರ್ಕಾರಗಳು ಮಾಡುವ ಕೆಲಸವನ್ನು ಇಂದು ನೀವು ಮಾಡಿದ್ದೀರಿ. ಇದರ ಉದ್ಘಾಟನೆಗೆ ಬರದಿದ್ದರೆ ನಮ್ಮ ಹುದ್ದೆಗೆ ಚ್ಯುತಿ ಬರುತ್ತಿತ್ತು. ಈ ಕೇಂದ್ರದ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ವಿನೋದ್ ರಾಜ್ ಅವರ ಬೆಂಬಲ ದೊಡ್ಡ ಮಟ್ಟದಲ್ಲಿದೆ. ಈ ಆಸ್ಪತ್ರೆಗೆ ಯಾವ್ಯಾವ ಸೌಕರ್ಯಗಳು, ಸೌಲಭ್ಯಗಳು, ಸಿಬ್ಬಂದಿ ಬೇಕೋ ಅದನ್ನು ಸರ್ಕಾರ ಕೊಡಲಿದೆ” ಎಂದಿದ್ದಾರೆ ಬಸವರಾಜ್ ಬೊಮ್ಮಾಯಿ. ಈ ಕಾರ್ಯಕ್ರಮದಲ್ಲಿ ಡಾ. ಎಂ ಲೀಲಾವತಿ, ಶಾಸಕ ಶ್ರೀನಿವಾಸ ಗೌಡ, ನಾಗರಾಜ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್, ನಟ ವಿನೋದ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.