ಕರಾವಳಿ ಭಾಗದ, ಜಾನಪದ ಹಿನ್ನಲೆಯುಳ್ಳ ಒಂದು ದೈವದ ಕಥೆಯನ್ನು ಕಾಡಿನೊಳಗಡೆ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಹೇಳಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಅವರು ಕಾಂತಾರದ ಮೂಲಕ ಸಾಕಷ್ಟು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಈ ಚಿತ್ರ ಕನ್ನಡದಲ್ಲಿ ದೊಡ್ಡ ಹಿಟ್ ಆಗಿ, ಬೇರೆ ಭಾಷೆಗಳಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ. ಹೀಗಿದ್ದಾಗ್ಯೂ ಈ ಚಿತ್ರದ ಬಗ್ಗೆ ಕೆಲವು ನಕಾರಾತ್ಮಕ ಮಾತುಗಳು ಕೇಳಿ ಬಂದಿತ್ತು.
ಕಾಂತಾರ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಮಾನಸಿ ಸುಧೀರ್, ಸಪ್ತಮಿ ಗೌಡ, ಶೈನ್ ಶೆಟ್ಟಿ, ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಅವರು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದ್ದಾರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಕ್ಲೈಮ್ಯಾಕ್ಸ್ನಲ್ಲಿ ದೈವದ ಹಾಡೊಂದಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ.
ಕಾಂತಾರಾ ಸಿನಿಮಾ ಫೇಮಸ್ ಟ್ಯೂನ್ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಬಹಳಷ್ಟು ಜನರು ಈ ಹಾಡಿನ ಟ್ಯೂನ್ ಹೋಲುವ ಮಲಯಾಳಂ ಹಾಗೂ ಮರಾಠಿ ಹಾಡುಗಳ ಒರಿಜಿನಲ್ ಕ್ಲಿಪ್ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಈಗ ಸಿನಿಮಾದ ಸಾಂಗ್ ಕಾಪಿ ಗದ್ದಲ ಶುರುವಾಗಿದೆ.
ದೇಶಾದ್ಯಂತ ಈ ಸಿನಿಮಾ ಭಾರೀ ಹವಾ ಸೃಷ್ಟಿಸಿದ್ದು ಇದು ಹೊಂಬಾಳೆ ನಿರ್ಮಾಣದ ಕರ್ನಾಟಕದಲ್ಲಿ ಅತ್ಯಧಿಕ ವೀಕ್ಷಿಸಲ್ಪಟ್ಟ ಸಿನಿಮಾ ಎನ್ನುವ ಹಿರಿಮೆಗೂ ಪಾತ್ರವಾಗಿದೆ. ಈ ಹಿಂದೆ ಸಿನಿಮಾ ಎದುರಿಸಿದ್ದ ಟ್ಯೂನ್ ಕಾಪಿ ವಿಚಾರ ಈಗ ಮತ್ತೆ ಸದ್ದು ಮಾಡಿದ್ದು ಈ ಬಾರಿ ಸಾಂಗ್ನ ಒರಿಜಿನಲ್ ಟ್ಯೂನ್ ಮಾಡಿರುವ ತೈಕ್ಕುಡಂ ಬ್ರಿಡ್ಜ್ ಕಾಂತಾರ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ತಮ್ಮ ಟ್ಯೂನ್ ಕದ್ದಿರುವ ವಿಚಾರವಾಗಿ ಹಾಗೂ ಅದನ್ನು ಎಲ್ಲಿಯೂ ಮೆನ್ಸನ್ ಮಾಡದೆ ಇರುವ ಹಿನ್ನೆಲೆಯಲ್ಲಿ ತೈಕ್ಕುಡಂ ಬ್ರಿಡ್ಜ್ ಕಾನೂನಾತ್ಮಕವಾಗಿ ಈ ವಿಚಾರವನ್ನು ಎದುರಿಸಲು ಸಿದ್ಧತೆ ನಡೆಸಿದೆ. ಇದೀಗ ಈ ಬಗ್ಗೆ ತನ್ನ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ತೈಕ್ಕುಡಂ ಬಿಡ್ಜ್ ಅಪ್ಡೇಟ್ ಕೂಡಾ ಕೊಟ್ಟಿದೆ.
ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಕಾಂತಾರ ತಂಡದೊಂದಿಗೆ ಪಾಲುದಾರಿಕೆ ಹೊಂದಿಲ್ಲ ಎಂದು ನಾವು ತಿಳಿಸುತ್ತಿದ್ದೇವೆ. ಆಡಿಯೋ ವಿಷಯದಲ್ಲಿ ನಮ್ಮ ಹಾಡು ನವರಸಂ ಮತ್ತು ವರಾಹ ರೂಪಂ ನಡುವಿನ ಹೋಲಿಕೆಗಳು ಕಂಡುಬಂದಿದ್ದು ಇಲ್ಲಿ ಕಾಪಿ ರೈಟ್ ಕಾನೂನುಗಳು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ನಮ್ಮ ಪ್ರಕಾರ ಪ್ರೇರಿತ ಮತ್ತು ಚೌಕಟ್ಟಿನ ನಡುವಿನ ವ್ಯತ್ಯಾಸವು ವಿಭಿನ್ನವಾಗಿದೆ. ಇದು ನಿರ್ವಿವಾದ ವಿಚಾರ. ಆದ್ದರಿಂದ ನಾವು ಇದಕ್ಕೆ ಕಾರಣವಾದ ತಂಡದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಬಯಸುತ್ತೇವೆ. ಸಿನಿಮಾ ತಂಡವು ಹಾಡನ್ನು ಅವರ ಮೂಲ ಕೃತಿಯಾಗಿ ಪ್ರಚಾರ ಮಾಡಿದ್ದಾರೆ.
ನಮ್ಮ ಕೇಳುಗರ ಬೆಂಬಲವನ್ನು ನಾವು ಕೇಳುತ್ತಿದ್ದೇವೆ. ಅದರ ಬಗ್ಗೆ ಪ್ರಚಾರ ಮಾಡಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಮ್ಯೂಸಿಕ್ ಕಾಪಿ ಮಾಡುವ ಕಾಪಿ ರೈಟ್ಸ್ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತೇವೆ ಎಂದು ಪೋಸ್ಟ್ ಮಾಡಲಾಗಿದ್ದು ಇದರಲ್ಲಿ ಹೊಂಬಾಳೆ ಫಿಲ್ಮ್ಸ್, ಅಜನೀಶ್ ಲೋಕನಾಥ್, ರಿಷಬ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಲಾಗಿದೆ.