ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮಕ್ಕೆ 30ರಿಂದ 40 ಸಾವಿರ ಅಭಿಮಾನಿಗಳು ಹಾಜರಾದರೆ, ಹೈದರಾಬಾದ್ ಮತ್ತು ಚೆನ್ನೈನಿಂದ ಸ್ಟಾರ್ ನಟರು ಕೂಡ ಆಗಮಿಸಿದ್ದರು. ಆದರೆ, ಈ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟರೇ ಕಾಣೆಯಾಗಿದ್ದರು ಎಂಬುದು ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಪುನೀತ ಪರ್ವ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸ್ವಂತ ಖರ್ಚಿನಲ್ಲಿ ಬಸ್ಗಳನ್ನು ಮಾಡಿಕೊಂಡು ಸಾವಿರಾರು ಅಭಿಮಾನಿಗಳು ಅರಮನೆ ಮೈದಾನಕ್ಕೆ ಬಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರದ ಕೆಲ ಸಚಿವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಮಿಳಿನ ಖ್ಯಾತ ನಟ ಸೂರ್ಯ, ತೆಲುಗಿನ ರಾಣಾ ದಗ್ಗುಬಾಟಿ, ಸಿದ್ಧಾರ್ಥ್, ಅಖಿಲ್ ಅಕ್ಕಿನೇನಿ, ಬಹುಭಾಷಾ ನಟ ಪ್ರಕಾಶ್ ರಾಜ್, ಸಾಯಿ ಕುಮಾರ್ ಹೀಗೆ ಹಲವರು ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅಪ್ಪು ಕುರಿತು ವಿಶೇಷ ವಿಡಿಯೋ ಸಂದೇಶ ಕೂಡ ರವಾನಿಸಿದ್ದರು.ವಿ ರವಿಚಂದ್ರನ್, ರಮೇಶ್ ಅರವಿಂದ್, ಯಶ್, ಧ್ರುವ ಸರ್ಜಾ, ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಪ್ರಜ್ವಲ್ ದೇವರಾಜ್, ಸಾಧು ಕೋಕಿಲ, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ, ಸತೀಶ್ ನಿನಾಸಂ, ನೆನಪಿರಲಿ ಪ್ರೇಮ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ರಮ್ಯ, ಸುಮಲತಾ ಅಂಬರೀಶ್, ಸುಧಾರಾಣಿ, ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವು ಸ್ಯಾಂಡಲ್ವುಡ್ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಪ್ರಮುಖ ನಟರು ಎಂದೇ ಗುರುತಿಸಿಕೊಳ್ಳುವ ಸುದೀಪ್ ಮತ್ತು ದರ್ಶನ್ ಇಬ್ಬರ ಸುಳಿವೂ ಇರಲಿಲ್ಲ ಎಂದು ನೆಟ್ಟಿಗರು ಕಿಡಿ ಕಾರಿದ್ದರು.ರಾಜ್ ಕುಟುಂಬಸ್ಥರು ಆಹ್ವಾನ ನೀಡಿದ್ದರೂ ಸಹ ಸುದೀಪ್, ದರ್ಶನ್, ಜಗ್ಗೇಶ್ ಮುಂತಾದವರು ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಟೋಬರ್ 18ರಂದು ಸುದೀಪ್ ಅವರ ವಿವಾಹ ವಾರ್ಷಿಕೋತ್ಸವವಾದ್ದರಿಂದ ಕುಟುಂಬದ ಜೊತೆ ಅವರು ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ, ಹೀಗಾಗಿ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದು ಅಭಿಮಾನಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ, ದರ್ಶನ್ ಅವರು ಗೈರಾಗಿದ್ದೇಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.
ಹಿರಿಯ ನಟ ಜಗ್ಗೇಶ್ ಕೂಡ ತಾವು ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಅಮೆರಿಕದಲ್ಲಿದ್ದೇನೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಗದ ಕಾರಣ ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇನ್ನು ದರ್ಶನ್ ಅವರ ಸಿನಿಮಾ ರಿಲೀಸ್ ವಿಚಾರದಲ್ಲಿ ವೈಯಕ್ತಿಕ ವಿಚಾರವಾಗಿ ದರ್ಶನ್ ಅವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.