ಕೊರೊನಾ ಉಂಟಾಗಿರುವ ಆರ್ಥಿಕ ಸಂಕಷ್ಟ, ಹಣದುಬ್ಬರ, ಸೆಮಿಕಂಡಕ್ಟರ್ಗಳ ಪೂರೈಕೆಯಲ್ಲಿ ವ್ಯತ್ಯಯ, ಪೂರೈಕೆ ಸರಪಳಿಯಲ್ಲಿ ಏರಿಳಿತ ಇಷ್ಟೆಲ್ಲಾ ಸವಾಲುಗಳ ನಡುವೆ 2022ರಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರ ಉತ್ತಮ ಸಾಧನೆ ಮಾಡಿದೆ. ಭಾರತದಲ್ಲಿ ಟಾಟಾ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಟಾಟಾ ಉತ್ಪನ್ನಗಳು ವಿಶ್ವಾಸಾರ್ಹವಾಗಿರುತ್ತವೆ, ಗ್ರಾಹಕರಿಗೆ ವಂಚನೆ ಮಾಡುವುದಿಲ್ಲ ಎಂಬುದು ಈಗಾಗಲೇ ಹಲವಾರು ಬಾರಿ ಸಾಭೀತಾಗಿದೆ. ಟಾಟಾದವರು ವಾಹನ ಉದ್ಯಮದಲ್ಲೂ ಪ್ರಮಾಣಿತ ಉತ್ಪನ್ನಗಳನ್ನು ನೀಡುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜೀಯಾಗುವುದಿಲ್ಲ.
ದೇಶದಲ್ಲಿ ಮೂರು ಟಾಟಾ ಕಾರುಗಳು ಪ್ರತಿ ತಿಂಗಳು ಅತಿಹೆಚ್ಚು ಮಾರಾಟವನ್ನು ದಾಖಲಿಸುತ್ತವೆ. ಈ ಮೂರು ಕಾರುಗಳನ್ನು ಭಾರತೀಯರು ಹೆಚ್ಚಾಗಿ ಖರೀದಿಸಲು ಏಕೆ ಇಷ್ಟಪಡುತ್ತಾರೆ ಎಂಬುದರ ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಟಾಟಾ ಮೋಟಾರ್ಸ್ ಉತ್ಪನ್ನಗಳ ಬೇಡಿಕೆಯು ಹಲವಾರು ಪಟ್ಟು ಹೆಚ್ಚಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಂಪನಿಯ ನೆಕ್ಸಾನ್ ಮಾದರಿಯು ಜನರಲ್ಲಿ ಭಾರೀ ಬೇಡಿಕೆಯನ್ನು ಗಿಟ್ಟಿಸಿಕೊಂಡಿದೆ. ಇದಾದ ಬಳಿಕ ಪಂಚ್, ಟಿಯಾಗೊ ಸೇರಿದಂತೆ ಇತ್ತೀಚಿನ ಕಾರು ಮಾದರಿಗಳು ಜನರಿಂದ ಸ್ವಾಗತಿಸಲ್ಪಡುತ್ತಿವೆ. ಟಾಟಾ ಮೋಟಾರ್ಸ್ನ ಜನಪ್ರಿಯ ಮತ್ತು ಕೈಗೆಟುಕುವ ಸಬ್-ಕಾಂಪ್ಯಾಕ್ಟ್ SUV ಟಾಟಾ ಪಂಚ್ ಹೊಸ ಮೈಲಿಗಲ್ಲನ್ನು ಸಾಧಿಸಿದೆ.
ಟಾಟಾ ಪಂಚ್ ಬಿಡುಗಡೆಯಾದ ಬಳಿಕ ಕೇವಲ 4 ತಿಂಗಳೊಳಗೆ 32,000 ಕ್ಕೂ ಹೆಚ್ಚು ಯುನಿಟ್ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಮಾರಾಟವಾದ ಟಾಟಾ ಕಂಪೆನಿಯ ಸಬ್-ಕಾಂಪ್ಯಾಕ್ಟ್ SUV ಎನಿಸಿಕೊಂಡಿದೆ.
ನೆಕ್ಸಾನ್ ನಂತರ, ಟಾಟಾ ಪಂಚ್ ಕಂಪನಿಯ ಹೆಚ್ಚು ಮಾರಾಟವಾದ ಕಾರು. ಅಲ್ಲದೆ, ಇದು ಟಾಟಾದ ಅತ್ಯಂತ ಚಿಕ್ಕ ಸ್ಪೋರ್ಟ್ಸ್ ಯುಟಿಲಿಟಿ ವಾಹನವಾಗಿದೆ. ಇದು ಕಂಪನಿಯ ALFA-ARC ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ (ಆಲ್ಟ್ರೋಜ್ನಂತೆಯೇ). ಹಾಗೆಯೇ ಇದು ಟಾಟಾ ಹ್ಯಾರಿಯರ್ಗೆ ಸ್ವಲ್ಪಮಟ್ಟಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ.
ಕಂಪನಿಯು ಟಾಟಾ ಪಂಚ್ ಅನ್ನು 7 ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಿದೆ. ಅಟಾಮಿಕ್ ಆರೆಂಜ್, ಕ್ಯಾಲಿಪ್ಸೊ ರೆಡ್, ಡೇಟೋನಾ ಗ್ರೇ, ಮೆಟಿಯರ್ ಬ್ರಾಂಜ್, ಆರ್ಕಸ್ ವೈಟ್, ಟೊರ್ನಾಡೊ ಬ್ಲೂ ಮತ್ತು ಟ್ರಾಪಿಕಲ್ ಮಿಸ್ಟ್ ಕಲರ್ಗಳಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ. ಬಿಡುಗಡೆಯಾದ ನಾಲ್ಕು ತಿಂಗಳಲ್ಲೇ 32 ಸಾವಿರಕ್ಕೂ ಅಧಿಕ ಕಾರುಗಳು ಮಾರಾಟವಾಗಿರುವುದು ಟಾಟಾ ಪಂಚ್ನ ಜನಪ್ರಿಯತೆಯನ್ನು ತೋರಿಸುತ್ತದೆ. ಪೆಟ್ರೋಲ್ ಮತ್ತು CNG ಮೋಟಾರ್ ಆಯ್ಕೆಗಳೊಂದಿಗೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಕಾರು ಮಾದರಿಗಳಲ್ಲಿ ಟಿಯಾಗೋ ಒಂದಾಗಿದೆ. ಟಾಟಾ ಮೋಟಾರ್ಸ್ ಈ ಕಾರನ್ನು ನೆಕ್ಸಾನ್ನಂತಹ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಈಗಾಗಲೇ ಉತ್ತಮ ಮಾರಾಟದ ಬೆಳವಣಿಗೆಯನ್ನು ದ್ವಿಗುಣಗೊಳಿಸಲು ಟಿಯಾಗೋದ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಟಾಟಾ ಮೋಟಾರ್ಸ್ ಸಿದ್ದತೆ ನಡೆಸುತ್ತಿದೆ. ಆಗಸ್ಟ್ 2022 ರಲ್ಲಿ ಟಿಯಾಗೋ ಕಾರುಗಳ 7,209 ಯುನಿಟ್ಗಳು ಮಾರಾಟವಾಗಿವೆ. ಇದು ಕಳೆದ ಆಗಸ್ಟ್ 2021 ಕ್ಕಿಂತ ಶೇ 27 ರಷ್ಟು ಹೆಚ್ಚು ಮಾರಾಟವಾಗಿದೆ. ಇದೇ ಕಾರು ಮಾದರಿಯು ಆಗಸ್ಟ್ 2021 ರಲ್ಲಿ ಕೇವಲ 5,658 ಯುನಿಟ್ಗಳನ್ನು ಮಾರಾಟ ಮಾಡಿರುವುದು ಗಮನಾರ್ಹವಾಗಿದೆ. ಸುರಕ್ಷತೆಯ ರೇಟಿಂಗ್ನಲ್ಲಿ ಟಿಯಾಗೋ ಐದರಲ್ಲಿ ನಾಲ್ಕು ಸ್ಟಾರ್ಗಳನ್ನು ಗಳಿಸಿದೆ. ಇಂತಹ ಅತ್ಯುತ್ತಮ ಗುಣಮಟ್ಟದಿಂದಾಗಿ ಮಾರಾಟವು ಬೆಳೆಯಲು ಪ್ರಾರಂಭಿಸಿದೆ. ಈ ಮೂರು ಮಾದರಿಗಳು ಕಂಪನಿಯ ಹೆಚ್ಚು ಮಾರಾಟವಾಗುವ ಮಾದರಿಗಳಾಗಿದ್ದು, ಆಗಸ್ಟ್ 2022 ರಲ್ಲಿ ಭಾರೀ ಮಾರಾಟವನ್ನು ಟಾಟಾ ಮೋಟಾರ್ಸ್ ದಾಖಲಿಸಿದೆ. ಆಗಸ್ಟ್ 2021 ರ ತಿಂಗಳಿಗೆ ಹೋಲಿಸಿದರೆ ಈ ಬಾರಿಯ ಮಾರಾಟದಲ್ಲಿ ಭಾರೀ ಸುಧಾರಣೆ ಕಂಡಿದೆ.