ರಾಮಭಕ್ತ ಹನುಮಂತ, ಭಕ್ತರ ಎಲ್ಲ ನೋವುಗಳನ್ನು ನಿವಾರಿಸುವ ಕಲಿಯುಗದ ದೇವರು. ಭಕ್ತರ ಕಷ್ಟ, ಸಂಕಷ್ಟ ಪರಿಹರಿಸಿ ಅವರಲ್ಲಿ ಶಕ್ತಿ , ಬುದ್ಧಿವಂತಿಕೆ , ಜ್ಞಾನ ಬೆಳೆಸುವವನು ಆಂಜನೇಯ. ಆಂಜನೇಯನಿಗೆ ನಾನಾ ಹೆಸರುಗಳಿದ್ದು, ಹನುಮಂತ, ಆಂಜನೇಯ, ಮಾರುತಿ, ವಾಯುಪುತ್ರ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಯಾರು ಹನುಮಂತನ ಮಂತ್ರ ಜಪಿಸುತ್ತಾರೆ ಅಂತಹವರಿಗೆ ಕೆಟ್ಟ ಆತ್ಮಗಳು, ದೆವ್ವ ಹಾಗೂ ಯಾವುದೇ ದುಷ್ಟ ಶಕ್ತಿಯ ಕಾಟ ಇರುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ಬ್ರಹ್ಮಚಾರಿಯಾಗಿರುವ ಹನುಮಂತನನ್ನು ಪೂಜಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹನುಮಂತನ ಪೂಜೆಯೂ ಅಷ್ಟು ಸುಲಭವಲ್ಲ. ಮಹಿಳೆಯವರು ಮಡಿವಂತಿಕೆಯನ್ನು ಕಾಪಾಡಿಕೊಳ್ಳಬೇಕು. ತಾವು ಮಾಡುವ ಪೂಜೆಯಲ್ಲಿ ಸ್ವಲ್ಪ ತಪ್ಪು ಆದರೂ ಕೂಡ ಆಂಜನೇಯನ ಕೋಪಕ್ಕೆ ಗುರಿಯಾಗುತ್ತದೆ. ಹೀಗಾಗಿ ಹನುಮಂತನನ್ನು ಪೂಜಿಸುವಾಗ ಈ ಕೆಳಗಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.
ಸ್ವಚ್ಛತೆಯತ್ತ ಚಿತ್ತ ಹರಿಸಿ: ರಾಮನ ಭಕ್ತ ಹನುಮಂತನನ್ನು ಪೂಜಿಸುವ ವೇಳೆಯಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕು. ಪೂಜೆಯ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡರೆ ಹನುಮಂತನು ಒಲಿಯುತ್ತಾನೆ. ಅಷ್ಟೇ ಅಲ್ಲದೇ, ಹನುಮಂತ ಜೊತೆಗೆ ಅಂಜನಿ ಹಾಗೂ ಶ್ರೀರಾಮನ ಪೂಜೆ ಮಾಡಿದ್ರೆ ಹನುಮಂತ ಬೇಗ ಭಕ್ತರ ಪೂಜೆಗೆ ಒಲಿಯುತ್ತಾನೆ.
ಪೂಜೆಯಲ್ಲಿ ಕೆಂಪು ಬಣ್ಣ ಬಳಕೆ ಹೆಚ್ಚಿರಲಿ: ರಾಮನ ಬಂಟ ಹನುಮನಿಗೆ ಕೆಂಪು ಬಣ್ಣ ಬಹಳ ಪ್ರಿಯವಾದದ್ದು. ಹೀಗಾಗಿ ಪೂಜೆಯ ವೇಳೆ ಕೆಂಪನ್ನು ಹೆಚ್ಚಾಗಿ ಬಳಸಿ. ಪೂಜೆ ಮಾಡುವಾಗ ಕೆಂಪು ಬಟ್ಟೆಯನ್ನು ಧರಿಸಿ ಪೂಜೆ ಮಾಡುವುದು ಒಳ್ಳೆಯದು. ಅದರ ಜೊತೆಗೆ ಕೆಂಪು ಬಣ್ಣದ ಹೂವಿನ ಜೊತೆಗೆ ಪಂಚಾಮೃತವನ್ನು ಹನುಮಂತನಿಗೆ ಅರ್ಪಿಸಿದರೆ ಹನುಮಂತನ ಕೃಪೆಗೆ ಪಾತ್ರರಾಗಬಹುದು.
ಬ್ರಹ್ಮಚರ್ಯ ಪಾಲನೆ ಅಗತ್ಯ: ಯಾವುದೇ ದಿನ ಹನುಮಂತನ ಪೂಜೆ ಮಾಡುವವುದಾದರೆ, ಅದರ ಹಿಂದಿನ ದಿನದಿಂದಲೇ ಬ್ರಹ್ಮಚರ್ಯವನ್ನು ಪಾಲನೆ ಮಾಡಬೇಕು. ಮನಸ್ಸು ಕೂಡ ಶುದ್ಧವಾಗಿರಬೇಕು. ಯಾರ ಮೇಲೂ ದ್ವೇಷದ ಭಾವನೆ, ಅಸೂಯೆಯನ್ನು ಹೊಂದಿರಬಾರದು. ಮಧು ಮಾಂಸ ಸೇವನೆಯಿಂದ ದೂರವಿರಬೇಕು. ಅದರ ಜೊತೆಗೆ ಆಹಾರದ ವಿಚಾರದಲ್ಲಿಯೂ ಜಾಗರೂಕರಾಗಿರಬೇಕು. ಹೌದು, ಉಪ್ಪು, ಮೆಣಸು ಹಾಗೂ ಬೆಳ್ಳುಳ್ಳಿ ಸೇವನೆ ಕೂಡ ಮಾಡಬಾರದು.
ವಿಗ್ರಹವನ್ನು ಸ್ಪರ್ಶಿಸುವುದು ಸಲ್ಲದು : ಹನುಮಂತ ಬ್ರಹ್ಮಚಾರಿ ಯಾಗಿರುವ ಕಾರಣ, ವಿಗ್ರಹವನ್ನು ಮಹಿಳೆಯರು ಸ್ಪರ್ಶಿಸುವಂತಿಲ್ಲ. ಅಷ್ಟೇ ಅಲ್ಲದೇ, ಮಹಿಳೆಯರು ಹನುಮಂತನ ಪಾದ ಸ್ಪರ್ಶಿಸಿ ನಮಸ್ಕಾರ ಮಾಡಬಾರದು. ಹನುಮಂತನಿಗೆ ಮಹಿಳೆಯರು ಸಿಂಧೂರ ಅರ್ಪಣೆ ಮಾಡಬಾರದು ಎನ್ನುವುದು ಶಾಸ್ತ್ರದಲ್ಲಿದೆ. ಇನ್ನು, ಚೋಳವನ್ನು ಅರ್ಪಿಸದೆ ಆರಾಧನೆ ಮಾಡಬೇಕಾಗುತ್ತದೆ.
ಚೋಳ ಅರ್ಪಣೆ ಹಾಗೂ ಪೂಜೆಗೆ ಸೂಕ್ತ ಸಮಯ: ಹನುಮಂತನಿಗೆ ಪ್ರಿಯವಾದ ಹೊದಿಕೆಯೆಂದರೆ ಅದುವೇ ಚೋಳ. ಈ ಚೋಳವನ್ನು ಪುರುಷ ಭಕ್ತರು, ಹನುಮಂತನಿಗೆ ಅರ್ಪಿಸಬೇಕು. ಹನುಮಂತನನ್ನು ಸೂಕ್ತ ಸಮಯದಲ್ಲಿ ಮಾತ್ರ ಪೂಜಿಸಬೇಕು. ಬೆಳಿಗ್ಗೆ ಮತ್ತು ಸಂಜೆ ಕೂಡ ಹನುಮಂತನ ಪೂಜೆಗೆ ಒಳ್ಳೆಯ ಸಮಯವಾಗಿದೆ. ಮೊದಲು ದೀಪ ಬೆಳಗಿಸಿ, ನಂತರ ಪೂಜೆ ಮಾಡಿ : ಹನುಮಂತನ ಪೂಜೆ ವೇಳೆ ಮೊದಲು ದೀಪವನ್ನು ಹಚ್ಚಬೇಕು ಹನುಮಂತನಿಗೆ ದೀಪ ಬೆಳಗುವ ವೇಳೆ ಮಲ್ಲಿಗೆ ಎಣ್ಣೆ ಅಥವಾ ತುಪ್ಪವನ್ನು ಮಾತ್ರ ಬಳಕೆ ಮಾಡಬೇಕು. ದೀಪ ಬೆಳಗಿಸಿ ನಂತರ ಪೂಜೆ ಮಾಡಬಹುದು.