ದೇಶದಲ್ಲೆಡೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುದ್ದಿ ಕೇಳಿ ಬರುತ್ತಿರುತ್ತವೆ. ಆದರೆ ಡ್ರಗ್ಸ್ ಪ್ರಕರಣದ ಸಂಬಂಧ ಬೆಂಗಳೂರಿನಲ್ಲಿ ಬಂಧಿಸಲು ಬಂದಿದ್ದಾಗ ತಮಗೆ ಅಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಮೀನು ವ್ಯಾಪಾರಿಯೊಬ್ಬನು ತಪ್ಪಿಸಿಕೊಂಡಿದ್ದನು. ಆದರೆ ಕೊನೆಗೂ ಕೇರಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳ ಮೂಲದ ಜಾಫರ್ ಬಂಧಿತನಾಗಿದ್ದು, ಆರೋಪಿಯಿಂದ ಆಟಿಕೆ ಪಿಸ್ತೂಲ್ ಜಪ್ತಿ ಮಾಡಲಾಗಿದೆ.
ಅಂದಹಾಗೆ, 15 ದಿನಗಳ ಹಿಂದೆ ಕುರುತಿಕಾಡ್ ಠಾಣೆ ವ್ಯಾಪ್ತಿಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿ ಜಾಫರ್ನನ್ನು ಬೆನ್ನು ಬಿದ್ದಿದ್ದ ಠಾಣೆಯ ಪಿಎಸ್ಐ ಸುನೋಮೋನ್ ಹಾಗೂ ಕಾನ್ಸ್ಟೇಬಲ್ಗಳಾದ ಸತೀಶ್ ಕುಮಾರ್, ಸಾಥಿಕ್ ಪಾಶಾ ಮೊಬೈಲ್ ಲೋಕೇಷನ್ ಆಧರಿಸಿ ಬೆಂಗಳೂರಿಗೆ ಬಂದಿದ್ದರು. ಆರೋಪಿ ಜಾಫರ್ ಎಚ್ಎಸ್ಆರ್ ಲೇಔಟ್ನಲ್ಲಿರುವ ಪ್ರತಿಷ್ಠಿತ ಹೋಟೆಲ್ವೊಂದಕ್ಕೆ ಊಟಕ್ಕೆ ಹೋದಾಗ ಆತನನ್ನು ಹಿಂಬಾಲಿಸಿದ ಪೊಲೀಸರು ಸೆರೆಹಿಡಿಯಲು ಮುಂದಾಗಿದ್ದಾರೆ. ಆದರೆ, ಆರೋಪಿ ತನ್ನ ಬಳಿಯಿದ್ದ ಆಟಿಕೆ ಪಿಸ್ತೂಲ್ ತೋರಿಸಿ ಪೊಲೀಸರಿಗೆ ಹೆದರಿಸಿ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದನು.
ಈ ಕುರಿತು ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಡಾ. ಸಿ.ಕೆ.ಬಾಬಾರವರು, ‘ಕೇರಳದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಜಾಫರ್ ವಾಸವಿದ್ದು, ಮೀನು ವ್ಯಾಪಾರ ಮಾಡಿಕೊಂಡಿದ್ದಾನೆ. ಹಣದಾಸೆಗೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದನು. ಈ ಬಗ್ಗೆ ಮಾಹಿತಿ ಪಡೆದ ಕೇರಳ ಪೊಲೀಸರು, ಜಾಫರ್ ಬಂಧನಕ್ಕೆ ಮುಂದಾಗಿದ್ದರು. ಆಗ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದನು. ಅದರ ಜೊತೆಗೆ, ಎಚ್ಎಸ್ಆರ್ ಲೇ ಔಟ್ನಲ್ಲಿ ಆಶ್ರಯ ಪಡೆದಿದ್ದ. ಈ ಸುಳಿವು ಪಡೆದ ಕೇರಳ ಪೊಲೀಸರು, ಆರೋಪಿ ಬಂಧನಕ್ಕೆ ಕಾರ್ಯಾಚರಣೆಗಿಳಿದಿದ್ದರು. ಆದರೆ ಆಗ ತನಿಖಾ ತಂಡಕ್ಕೆ ಜೀವ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದನು. ಈ ಸಂಬಂಧ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಕೇರಳ ಪೊಲೀಸರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದೀಗ, ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಪ್ರಕರಣ ಸಂಬಂಧ ಆರೋಪಿಯನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ.