ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲಿಮಿಟೆಡ್ ಓವರ್ ನಾಯಕ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್ಗೆ ದಿಢೀರ್ ಎಂದು ನಿವೃತ್ತಿ ಘೋಷಿಸಿದ್ದು ಭಾನುವಾರ(ಸೆ.11) ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಫಿಂಚ್ಗೆ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಆದಾಗ್ಯೂ ಅವರು ಆಸ್ಟ್ರೇಲಿಯಾದ ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದು ಆ್ಯರೋನ್ ಫಿಂಚ್ ದಿಢೀರ್ ನಿವೃತ್ತಿ ಘೋಷಿಸುತ್ತಿದ್ದಂತೆ ODI ಫಾರ್ಮೆಟ್ನಲ್ಲಿ ಆಸ್ಟ್ರೇಲಿಯಾದ ಮುಂದಿನ ನಾಯಕತ್ವಕ್ಕೆ ಹಲವಾರು ಹೆಸರುಗಳು ಹೊರಹೊಮ್ಮುತ್ತಿವೆ. ಹೌದು ಆದರೂ ಫಿಂಚ್ ಇಷ್ಟು ಬೇಗ ಏಕದಿನ ಫಾರ್ಮೆಟ್ಗೆ ನಿವೃತ್ತಿ ಘೋಷಿಸಿದ್ದು ಏಕೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದ್ದು 2023 ಐಸಿಸಿ 50 ಓವರ್ಗಳ ವಿಶ್ವಕಪ್ಗೆ ಒಂದು ವರ್ಷ ಮೊದಲೇ ತಂಡದ ನಾಯಕತ್ವ ಬಿಟ್ಟು ಕೊಡುವ ಮೂಲಕ ಫಿಂಚ್ ಟೆಸ್ಟ್ ಮತ್ತು ಟಿ20 ಫಾರ್ಮೆಟ್ನಲ್ಲಿ ಮುಂದುವರಿಯುವ ಆಸೆ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ತನ್ನ ನಿವೃತ್ತಿ ನಿರ್ಧಾರವನ್ನ ತಿಳಿಸಿರುವ ಆ್ಯರೋನ್ ಫಿಂಚ್ ರವರು ಇದು ಕೆಲವು ನಂಬಲಾಗದ ನೆನಪುಗಳೊಂದಿಗೆ ಅದ್ಭುತ ಸವಾರಿಯಾಗಿದೆ ಎಂದಿದ್ದು ಕೆಲವು ಅದ್ಭುತ ಏಕದಿನ ತಂಡಗಳ ಭಾಗವಾಗಲು ನಾನು ಅತ್ಯಂತ ಅದೃಷ್ಟಶಾಲಿಯಾಗಿದ್ದೇನೆ. ತನ್ನೊಂದಿಗೆ ಆಡಿದ ಎಲ್ಲರಿಂದ ಹಾಗೂ ತೆರೆಮರೆಯಲ್ಲಿರುವ ಅನೇಕ ಜನರ ಆಶೀರ್ವಾದ ಸಮಾನವಾಗಿ ಪಡೆದಿದ್ದೇನೆ ಎಂದು ಅವರು ಸೇರಿಸಿದ್ದು ಜೊತೆಗೆ ಮುಂದಿನ ವಿಶ್ವಕಪ್ಗೆ ಸಿದ್ಧರಾಗಲು ಮತ್ತು ಗೆಲ್ಲಲು ಹೊಸ ನಾಯಕನಿಗೆ ಉತ್ತಮ ಅವಕಾಶವನ್ನು ನೀಡುವ ಸಮಯ ಇದಾಗಿದೆ. ಈ ಹಂತಕ್ಕೆ ನನ್ನ ಪ್ರಯಾಣಕ್ಕೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಫಿಂಚ್ ಹೇಳಿದ್ದಾರೆ. ಈ ಮೂಲಕ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಆಸ್ಟ್ರೇಲಿಯಾ ಪುರುಷರ ತಂಡದ ಭಾಗವಾಗಿರುವುದಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ 145 ಏಕದಿನ ಪಂದ್ಯಗಳನ್ನಾಡಿದ್ದು 141 ಇನ್ನಿಂಗ್ಸ್ಗಳಲ್ಲಿ 39.14ರ ಬ್ಯಾಟಿಂಗ್ ಸರಾಸರಿಯಲ್ಲಿ 5,401 ರನ್ ಗಳಿಸಿದ್ದಾರೆ. 17 ಶತಕ ಹಾಗೂ 30 ಅರ್ಧಶತಕ ದಾಖಲಿಸಿರುವ ಫಿಂಚ್ 87.82ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದು ಆಸ್ಟ್ರೇಲಿಯಾ ಕಂಡಂತಹ ಸ್ಫೋಟಕ ಓಪನರ್ಗಳಲ್ಲಿ ಒಬ್ಬರಾದ ಈತ ತನ್ನ ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕವೇ ಹೆಸರಾದವರು. 2013ರಲ್ಲಿ ಮೆಲರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಫಿಂಚ್ ಸ್ಕಾಟ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಶತಕ (148) ಸಿಡಿಸಿದರು.
ಆ್ಯರೋನ್ ಫಿಂಚ್ ನೇರವಾಗಿ ಆಸ್ಟ್ರೇಲಿಯಾ ತಂಡದ ಚುಕ್ಕಾಣಿ ಹಿಡಿದವರಲ್ಲ. ಹೌದು 2018ರಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಸಿಲುಕಿದ ಪರಿಣಾಮ ಅವರನ್ನು ನಾಯಕತ್ವದಿಂದ ವಜಾಗೊಳಿಸಿದ್ದಲ್ಲದೆ ಒಂದು ವರ್ಷ ನಿಷೇಧ ಕೂರ ಹೇರಲಾಗಿತ್ತು. ಇನ್ನು ಈ ವೇಳೆಯಲ್ಲಿ ಆ್ಯರೋನ್ ಫಿಂಚ್ರನ್ನ ವೈಟ್ ಬಾಲ್ ಕ್ರಿಕೆಟ್ ಫಾರ್ಮೆಟ್ಗೆ ನಾಯಕನಾಗಿ ಆಯ್ಕೆ ಮಾಡಲಾಯಿತು. ಏಕದಿನ ಫಾರ್ಮೆಟ್ನಲ್ಲಿ ಅಷ್ಟೊಂದು ಗಮನಸೆಳೆಯದಿದ್ದರೂ ಸಹ ಟಿ20 ಫಾರ್ಮೆಟ್ನಲ್ಲಿ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆದ್ದು ಕೊಡುವಲ್ಲಿ ಫಿಂಚ್ ಯಶಸ್ವಿಯಾದ್ರು. 2021ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಆಸ್ಟ್ರೇಲಿಯಾಗೆ ಚೊಚ್ಚಲ ಚುಟುಕು ವಿಶ್ವಕಪ್ ಗೆದ್ದು ಕೊಟ್ಟ ಕೀರ್ತಿ ಇವರದ್ದಾಗಿದೆ.