Virat Kohli: ವಿರಾಟ್ ಕೊಹ್ಲಿ 71ನೇ ಶತಕದ ಸುಳಿವು ಗೆಳೆಯ ಎಬಿ ಡಿವಿಲಿಯರ್ಸ್ ಗೆ ಮೊದಲೇ ಗೊತ್ತಿತ್ತಾ? ವೈರಲ್ ಆಯ್ತು ಎಬಿಡಿ ಕೊಟ್ಟ ಹೇಳಿಕೆ
ಬರೋಬ್ಬರಿ 1021 ದಿನಗಳ ನಂತರ ವಿರಾಟ್ ಕೊಹ್ಲಿ ಶತಕದ ಬರ ನೀಗಿಸಿಕೊಂಡಿದ್ದು ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ ಕಿಂಗ್. ಅಫ್ಘಾನಿಸ್ತಾನದ ವಿರುದ್ಧ ನಡೆದ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ತಮ್ಮ 71 ನೇ ಶತಕ ಪೂರೈಸಿದ್ದು ಶತಕ ಗಳಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಆಟದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೌದು ಹಲವು ದಿಗ್ಗಜ ಆಟಗಾರರು ಕೊಹ್ಲಿ ಶತಕ ಗಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು ಮಿಸ್ಟರ್ 360 ಎ ಬಿ ಡಿವಿಲಿಯರ್ಸ್ ಕೂಡ ವಿರಾಟ್ ಕೊಹ್ಲಿ ಶತಕದ ಕುರಿತು ಟ್ವೀಟ್ ಮಾಡಿದ್ದು ಭಾರಿ ವೈರಲ್ ಆಗಿದೆ.
ಎಬಿಡಿ ಹಾಗೂ ವಿರಾಟ್ ಕೊಹ್ಲಿ ನಡುವೆ ಗಾಢವಾದ ಸ್ನೇಹವಿದ್ದು ಇಬ್ಬರೂ ಆಟಗಾರರು ದೀರ್ಘಕಾಲ ಐಪಿಎಲ್ನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದಾರೆ. ಹೌದು ಎಬಿಡಿ ಸದ್ಯ ನಿವೃತ್ತಿ ಘೋಷಿಸಿದ್ದರು ವಿರಾಟ್ ಕೊಹ್ಲಿ ಜೊತೆ ಸ್ನೇಹ ಉಳಿಸಿಕೊಂಡಿದ್ದು ಬಹುಕಾಲದ ನಂತರ ಗೆಳೆಯನ ಶತಕ ಗಳಿಸಿದ್ದನ್ನು ನೋಡಿರುವ ಎ ಬಿ ಡಿವಿಲಿಯರ್ಸ್ ಸಂತೋಷಗೊಂಡಿದ್ದಾರೆ. ಟ್ವೀಟ್ ಮುಖಾಂತರ ಗೆಳೆಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಅಫ್ಘಾನಿಸ್ತಾನ ಪಂದ್ಯಕ್ಕೆ ಹಿಂದಿನ ದಿನ ವಿರಾಟ್ ಕೊಹ್ಲಿ ಎ ಬಿ ಡಿವಿಲಿಯರ್ಸ್ ಜೊತೆ ಮಾತನಾಡಿರುವ ವಿಚಾರ ಬಹಿರಂಗವಾಗಿದ್ದು ಈ ಕುರಿತು ತಮ್ಮ ಟ್ವೀಟ್ನಲ್ಲಿ ಎಬಿಡಿ ಬರೆದುಕೊಂಡಿದ್ದಾರೆ. ನಿನ್ನೆ ಅವರ ಜೊತೆ ಮಾತನಾಡಿದಾಗ ಏನೋ ನಡೆಯುತ್ತಿರುವುದು ಗೊತ್ತಾಯಿತು ಚೆನ್ನಾಗಿ ಆಡಿದೆ ಗೆಳೆಯ ಎಂದು ವಿರಾಟ್ ಕೊಹ್ಲಿಗೆ ಶುಭಾಶಯ ತಿಳಿಸಿದ್ದಾರೆ. ಮತ್ತೊಂದು ಟ್ವೀಟ್ ಮಾಡಿರುವ ಎಬಿ ಡಿವಿಲಿರ್ಸ್ ವಿರಾಟ್ ಕೊಹ್ಲಿ ಶತಕ ಗಳಿಸಿದ ಸಂದರ್ಭವನ್ನು ಎಂತ ಮನೋಹರ ದೃಶ್ಯ ಎಂದು ಬಣ್ಣಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಸಂತಸ ವ್ಯಕ್ತಪಡಿಸಿದ್ದು ಕೊಹ್ಲಿ ಮೊದಲನೇ ಟಿ 20 ಶತಕ ಗಳಿಸಿದ್ದಾರೆ. ನೀವು ಶತಕ ಗಳಿಸಿದ್ದು ಸಂತಸ ತಂದಿದ್ದು ಅದ್ಭುತವಾದ ಇನ್ನಿಂಗ್ಸ್ಗೆ ಮನಃಪೂರ್ವಕ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಸುರೇಶ್ ರೈನಾ ಮಾತ್ರವಲ್ಲದೆ ಲಕ್ಷಾಂತರ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದು ಶತಕ ಗಳಿಸುತ್ತಿದ್ದಂತೆ ಟ್ವಿಟರ್ ನಲ್ಲಿ ಕ್ರಿಕೆಟಿಗರು ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಶತಕದ ಕುರಿತು ಟ್ವೀಟ್ ಮಾಡಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಉದ್ವೇಗ ಒತ್ತಡ ಅಥವಾ ಅದು ಏನೇ ಇರಲಿ ಅದು ವಿರಾಟ್ ಕೊಹ್ಲಿಯ ಮುಖದಲ್ಲಿ ಸಂಪೂರ್ಣವಾಗಿ ಕಾಣೆಯಾಗಿದೆ ಮತ್ತು ಆದ್ದರಿಂದ ಅವರು ತುಂಬಾ ಮುಕ್ತವಾಗಿ ಮತ್ತು ಆತ್ಮವಿಶ್ವಾಸದಿಂದ ಆಡುತ್ತಿದ್ದಾರೆ. ಮೈದಾನದ ಎಲ್ಲೆಡೆ ಸ್ಕೋರಿಂಗ್ ಸಾಗುತ್ತದೆ ಎಂದು ಹೇಳಿದ್ದಾರೆ. 1021 ದಿನಗಳ ನಂತರ ವಿರಾಟ್ ಕೊಹ್ಲಿ ಶತಕ ಗಳಿಸಿದ್ದಾರೆ. ಭಾರತ ಕ್ರಿಕೆಟ್ ಮತ್ತು ವಿರಾಟ್ ಕೊಹ್ಲಿಗೆ ಇದು ಉತ್ತಮ ದಿನ ಮತ್ತಷ್ಟು ಶತಕಗಳು ಬರಲಿವೆ ಎಂದು ಯೂಸುಫ್ ಪಠಾಣ್ ಟ್ವೀಟ್ ಮಾಡಿದ್ದಾರೆ.