ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುವ ಮಾತಿನಂತೆ, ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಗಳು ತಮ್ಮ ಮದುವೆಯನ್ನು ಬಹಳ ಅದ್ಧೂರಿಯಾಗಿ ಹಾಗೂ ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುವ ರೀತಿಯಲ್ಲಿ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಈಗಿನ ಕಾಲದ ಯುವ ಜನತೆ ಬಗ್ಗೆ ಕೇಳಲೇ ಬೇಡಿ, ತಮ್ಮ ಮದುವೆಯ ಬಗ್ಗೆ ಬೆಟ್ಟದಷ್ಟು ಆಸೆಯಿಟ್ಟುಕೊಂಡಿರುತ್ತಾರೆ.
ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂಬ ನಂಬಿಕೆ ಹಿಂದಿನ ಕಾಲದವರ ಹೇಳಿಕೆಯಾದರೆ, ಸ್ವರ್ಗಕ್ಕೇ ಕಿಚ್ಚು ಹಚ್ಚುವಷ್ಟು ಅದ್ಧೂರಿಯಾಗಿ ವಿವಾಹ ನಡೆಯಬೇಕೆಂಬ ಬಯಕೆ ಇಂದಿನ ಯುವಪೀಳಿಗೆಯರದ್ದು. ಒಂದು ವಿವಾಹ ನಡೆಯುತ್ತಿದೆ ಎಂದರೆ ಊರಿನವರೆಲ್ಲಾ ಒಟ್ಟಾಗಿ ಸೇರಿ ಮದುವೆ ನಡೆಸಿ ಕೊಡುತ್ತಿದ್ದುದು ಆ ಕಾಲದ ಹಿರಿಮೆಯಾದರೆ, ಇಂದಿನ ಕಾಲದವರದ್ದು ಹಪ್ಪಳ- ಸಂಡಿಗೆ ಮಾಡುವುದನ್ನೂ ಕೇಟರಿಂಗ್ನವರಿಗೆ ವಹಿಸಿಕೊಡುವುದು ಮಹಿಮೆಯಾಗಿದೆ.
ಇದೀಗ ಕಾಲ ಬದಲಾಗಿ ಬಿಟ್ಟಿದೆ. ಪ್ರತಿಯೊಂದು ಕೂಡ ಬದಲಾಗುತ್ತಿರುವ ಈ ಕಾಲದಲ್ಲಿ ಮದುವೆಯ ರೂಪುರೇಷೆ ಕೂಡಾ ಬದಲಾಗಿ ಬಿಟ್ಟಿದೆ. ನಾವುಗಳು ಬಾಲ್ಯದಲ್ಲಿ ಕಂಡ ಹಿಂದಿನ ಮದುವೆಗಳ ಸ್ವರೂಪವೇ ಬೇರೆಯಾಗಿತ್ತು. ಆಗೆಲ್ಲಾ ಒಂದು ಕುಟುಂಬದ ಮಗಳಿಗೋ, ಮಗನಿಗೋ ವಿವಾಹ ಗೊತ್ತಾಗುತ್ತಿದ್ದಂತೆ ಸಂಭ್ರಮ ಶುರುವಾಗುತ್ತಿತ್ತು. ಈಗ ಅದೇ ರೀತಿ ಮದುವೆಯಲ್ಲಿ ಬ್ಯಾಂಡ್ಸ್ ಗೆ ಅಂಟಿಯರ ಡ್ಯಾನ್ಸ್ ನೋಡಿ.