ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು, ಅನೇಕರು ಈ ಕೃಷಿಯನ್ನೇ ಬದುಕಿಗಾಗಿ ಅವಲಂಬಿಸಿದ್ದಾರೆ. ಹೌದು, ಗ್ರಾಮೀಣ ಭಾರತದ ಬಹುತೇಕ ಜನ ಕೃಷಿ ಮತ್ತು ಕೃಷಿ ಆಧಾರಿತ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಿಂದೆ ಇಂತಹ ಕೃಷಿಕರ ಸಂಖ್ಯೆಯನ್ನು, ಸರಾಗವಾಗಿ 80 ಪ್ರತಿಶತ ಎಂದು ಅಂದಾಜು ಮಾಡಬಹುದಾಗಿತ್ತು. ಇಂದಿಗೆ ಕೃಷಿ ಮಾಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಆದರೂ ಇಂದಿಗೂ 50 ರಿಂದ 60 ಕೋಟಿ ಜನ ಕೃಷಿ ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾರತದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಇಂದು, ಭಾರತ ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಭಾರತ ದೇಶದ ವಿಶಾಲವಾದ ಆರ್ಥಿಕ ಬೆಳವಣಿಗೆಯ ಹೋಲಿಕೆಯಲ್ಲಿ ಜಿಡಿಪಿಗೆ ಕೃಷಿಯ ಆರ್ಥಿಕ ಕೊಡುಗೆ ಸ್ಥಿರವಾಗಿ ಇಳಿಯುತ್ತಿದೆ.. ಭಾರತದಲ್ಲಿ ಇವತ್ತಿನ ಸಮಯದಲ್ಲಿ ತಮ್ಮ ವೃತ್ತಿಪರ ಕೆಲಸಗಳನ್ನು ಬಿಟ್ಟು ಕೃಷಿಯತ್ತ ದಾಪುಗಾಲು ಹಾಕುತ್ತಿದ್ದಾರೆ.
ಸರ್ಕಾರವು ಕೃಷಿಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮಳೆ, ಪ್ರವಾಹ, ಬರ, ಬೆಳೆನಾಶ ಹೀಗೆ ನಾನಾ ಕಾರಣಗಳಿಂದ ಬೆಳೆದ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅದರ ಜೊತೆಗೆ ಸಾಲದ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ, ರೈತರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ ರೈತರು ಗರಿಷ್ಠ 3ಲಕ್ಷ ರೂ. ತನಕ ಸಾಲ ಪಡೆಯುವ ಅವಕಾಶವಿದೆ. ಈ ಸಾಲದ ಹಣವನ್ನು ರೈತ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳು ಅಂದರೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಹಾಗೂ ಇತರ ವೆಚ್ಚಗಳಿಗೆ ಉಪಯೋಗವಾಗಬಹುದು. ಇನ್ನು, ಸಾಲ ಹಾಗೂ ಹಣಕಾಸಿನ ನೆರವು ಪಡೆಯಲು ರೈತರು ಏನು ಮಾಡಬೇಕು ಎನ್ನುವುದರ ವಿವರ ಇಲ್ಲಿದೆ.
ಅಂದಹಾಗೆ, ಗ್ರಾಮೀಣ ಪ್ರದೇಶದ ಗ್ರಾಹಕರು ತಮ್ಮ ಜಮೀನಿನ ಮಾಲೀಕತ್ವದ ದಾಖಲೆಗಳೊಂದಿಗೆ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ಬಳಿಕ ಅದರ ವಿಲೇವಾರಿಗೆ 2-4 ವಾರಗಳು ಬೇಕಾಗುತ್ತವೆ. ಈ ಸಾಲ ಸೌಲಭ್ಯವನ್ನು ಪಡೆಯಲು ಯಾರು ಅರ್ಹರು ಎಂದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಸಂಬಂಧಿಸಿ ಆರ್ ಬಿಐ ಹೊರಡಿಸಿರುವ ಸುತ್ತೋಲೆ ಪ್ರಕಾರ ರೈತರು ಹಿಡುವಳಿ ರೈತರು, ಮೌಖಿಕ ಗೇಣಿದಾರರು ಹಾಗೂ ಪಾಲು ಬೆಳೆಗಾರರು, ರೈತರ ಸ್ವಸಹಾಯ ಗುಂಪುಗಳು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ,
* ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ರೈತರು 1.60ಲಕ್ಷ ರೂ.ನಿಂದ 3ಲಕ್ಷ ರೂ. ತನಕ ಸಾಲ ಪಡೆಯಬಹುದು.
*ಸಾಲ ಪಡೆದವರಿಗೆ ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆ ಸೌಲಭ್ಯವಿದೆ. ಅಪಘಾತದಿಂದ ಅಂಗವೈಕಲ್ಯ ಅಥವಾ ಮೃತ್ಯುವಾದರೆ 50,000ರೂ. ಹಾಗೂ ಇತರ ಸಂದರ್ಭಗಳಲ್ಲಿ 25,000ರೂ. ವಿಮೆ ಸೌಲಭ್ಯವಿದೆ.
*ಬ್ಯಾಂಕಿನಿಂದ ನಗದು ವಿತ್ ಡ್ರಾಗೆ ಪಾಸ್ ಬುಕ್ ನೀಡಲಾಗುತ್ತದೆ.
* 25,000ರೂ. ನಗದು ಮಿತಿಯೊಂದಿಗೆ ಚೆಕ್ ಬುಕ್ ವಿತರಿಸಲಾಗುತ್ತದೆ.
*ರುಪೇ ಕ್ರೆಡಿಟ್ ಕಾರ್ಡ್ ಕೂಡ ನೀಡಲಾಗುತ್ತದೆ.
*ಸಾಲದ ಹಣದಲ್ಲಿ ರೈತರು ಬೀಜಗಳು, ರಾಸಾಯನಿಕಗಳು ಹಾಗೂ ಕೃಷಿ ಉಪಕರಣಗಳನ್ನು ಖರೀದಿಸಬಹುದು.
*ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ರೈತರಿಗೆ ಕ್ರೆಡಿಟ್ ಮಿತಿ ಹೆಚ್ಚಳ ಮಾಡಲಾಗುತ್ತದೆ.
*ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ರೈತರಿಗೆ ಬಡ್ಡಿದರಗಳ ಮೇಲೆ ಸಬ್ಸಿಡಿ ಕೂಡ ನೀಡಲಾಗುತ್ತದೆ.
*ಸಾಲ ಮೂರು ವರ್ಷಗಳ ಅವಧಿಗೆ ಲಭ್ಯವಿದೆ.
ಅಂದಹಾಗೆ, ಈ ಯೋಜನೆಯಲು ಪ್ರಯೋಜನ ಪಡೆಯಲು ಬೇಕಾಗಿರುವ ದಾಖಲೆಗಳು ಈ ಕೆಳಗಿನಂತಿವೆ.
*ಸಹಿ ಹೊಂದಿರುವ ಸಾಲದ ಮನವಿ ಪತ್ರ
*ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದು.
*ವಿಳಾಸ ದೃಢೀಕರಣಕ್ಕೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರ ಚೀಟಿ ಇತ್ಯಾದಿ.
*ನಿಮ್ಮ ಪಾಸ್ ಪೋರ್ಟ್ ಗಾತ್ರದ ಫೋಟೋ
*ಸಾಲ ನೀಡುವಿಕೆಗೆ ಸಂಬಂಧಿಸಿ ಬ್ಯಾಂಕ್ ಕೋರಿರುವ ಇತರ ಅಗತ್ಯ ದಾಖಲೆಗಳು. ಇನ್ನು,
ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಆನ್ ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಯೋನೋ ಅಪ್ಲಿಕೇಷನ್ ಮೂಲಕ ಅಥವಾ. ಎಸ್ ಬಿಐ ಯೋನೋ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿ ನೀವು ಕೂಡ ಫಲಾನುಭವಿಯಾಗಬಹುದು.