ಸದ್ಯ ಗ್ರೂಪ್ ಹಂತದಲ್ಲಿ ಅಬ್ಬರಿಸಿ ಏಷ್ಯಾ ಕಪ್ 2022 ಟೂರ್ನಿಯ ಸೂಪರ್-4 ಹಂತಕ್ಕೆ ಕಾಲಿಟ್ಟಿದ್ದ ಟೀಮ್ ಇಂಡಿಯಾ ಬಳಿಕ ಒಂದರ ಹಿಂದೆ ಒಂದರಂತೆ ಆಘಾತಕ್ಕೊಳಗಾಗಿದೆ. ಮೊದಲಿಗೆ ಮಂಡಿ ನೋವಿನ ಸಮಸ್ಯೆ ಕಾರಣ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ರವರು ಸೇವೆಯನ್ನು ಕಳೆದುಕೊಂಡ ಭಾರತ ತಂಡ ತದನಂತರ ಸೂಪರ್ ಫೋರ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 5 ವಿಕೆಟ್ಗಳ ಸೋಲಿನ ಮರ್ಮಾಘಾತಕ್ಕೀಡಾಯಿತು. ಇದರಿಂದ ಭಾರತ ತಂಡ ಟೂರ್ನಿಯ ಫೈನಲ್ ತಲುಪುವ ಅತ್ಯುತ್ತಮ ಅವಕಾಶ ಕಳೆದುಕೊಂಡಿತು. ಸದ್ಯ ಮಂಗಳವಾರ ನಡೆದ ಶ್ರೀಲಾಂಕ ವಿರುದ್ದ ಪಂದ್ಯದಲ್ಲೂ ಕೂಡ ಸೋತ ಭಾರತಕ್ಕೆ ಮುಖಭಂಗವಾಗಿದೆ.
ಇದರ ಬೆನ್ನಲ್ಲೆ ಗಾಯದ ಮೇಲೆ ಬರೆ ಎಂಬಂತೆ ಯುವ ಬಲಗೈ ವೇಗದ ಬೌಲರ್ ಅವೇಶ್ ಖಾನ್ ಅವರ ಸೇವೆಯನ್ನೂ ಕಳೆದುಕೊಂಡಿದ್ಫು ಅನಾರೋಗ್ಯದಿಂದ ಬಳಲಿರುವ ಅವೇಶ್ ಖಾನ್ ಸೂಪರ್-4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯದೇ ಹೋದರು. ಹೀಗಾಗಿ ಅವರನ್ನು ಟೂರ್ನಿಯಿಂದ ಹೊರಗಿಟ್ಟ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬದಲಿ ಆಟಗಾರನಾಗಿ ಮತ್ತೊಬ್ಬ ಯುವ ವೇಗಿ ದೀಪಕ್ ಚಹರ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದ್ದು ದೀಪಕ್ ಚಹರ್ ಹೆಚ್ಚುವರಿ ಆಟಗಾರನಾಗಿ ಭಾರತ ತಂಡದೊಂದಿಗೆ ಯುಎಇಗೆ ತೆರಳಿದ್ದರು.
ಇನ್ನು ಸೂಪರ್ ಫೋರ್ ಹಂತದಲ್ಲಿ ಭಾರತ ತಂಡ ಬ್ಯಾಕ್ ಟು ಬ್ಯಾಕ್ ಸೋಲನುಭವಿಸುವ ಮೂಲಕ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಿದ್ದು ಮೊದಲಿಗೆ ಪಾಕಿಸ್ತಾನ ಎದುರು 5 ವಿಕೆಟ್ಗಳಿಂದ ಸೋತರೆ ನಂತರ ಮಂಗಳವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಎದುರು 6 ವಿಕೆಟ್ಗಳ ಸೋಲಿನ ಆಘಾತಕ್ಕೊಳಗಾಯಿತು. ಇದರೊಂದಿಗೆ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪಬೇಕಾದರೆ ಪವಾಡವೇ ನಡೆಯಬೇಕಿದ್ದು ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತಂಡಗಳು ತಮ್ಮ ಪಾಲಿನ ಎರಡೂ ಪಂದ್ಯಗಳಲ್ಲಿ ಅತ್ಯಂತ ಹೀನಾಯವಾಗಿ ಸೋತು ಭಾರತ ತಂಡ ತನ್ನ ಕೊನೇ ಪಂದ್ಯದಲ್ಲಿ ಅಫಘಾನಿಸ್ತಾನ ಎದುರು ಭಾರಿ ರನ್ಗಳ ಅಂತರದಲ್ಲಿ ಗೆದ್ದರೆ ಮಾತ್ರ ಭಾರತಕ್ಕೆ ಫೈನಲ್ ತಲುಪುವ ಅಲ್ಪ ಅವಕಾಶವಿದೆ. ಸದ್ಯಕ್ಕೆ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ತಲುಪುವ ಫೇವರಿಟ್ ತಂಡಗಳಾಗಿ ಹೊರಹೊಮ್ಮಿವೆ.
ಇನ್ನು ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭದ ಹೊರತಾಗಿಯೂ ಕೂಡ ಸ್ಲಾಗ್ ಓವರ್ಗಳಲ್ಲಿ ಸಿಡಿಯಲು ಸಾಧ್ಯವಾಗದೆ ತನ್ನ 20 ಓವರ್ಗಳಲ್ಲಿ 173/8 ರನ್ಗಳ ಸವಾಲಿನ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ಕ್ಯಾಪ್ಟನ್ ರೋಹಿತ್ ಶರ್ಮಾ (72) ಮತ್ತು ಸೂರ್ಯಕುಮಾರ್ ಯಾದವ್ (34) ಹೊರತಾಗಿ ಉಳಿದ ಬ್ಯಾಟರ್ಗಳಿಂದ ಹೇಳಿಕೊಳ್ಳುವ ಬ್ಯಾಟಿಂಗ್ ಪ್ರದರ್ಶನ ಹೊರಬರಲೇ ಇಲ್ಲ.
ಇನ್ನು ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಕೈಹಾಕಿದ್ದು ಇನಿಂಗ್ಸ್ ಮಧ್ಯದಲ್ಲಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದರೂ ಕೊನೆಗೆ 19.5 ಓವರ್ಗಳಲ್ಲಿ 174 ರನ್ಗಳಿಸಿ 6 ವಿಕೆಟ್ಗಳ ಜಯ ತನ್ನದಾಗಿಸಿಕೊಂಡಿತು. ಶ್ರೀಲಂಕಾ ಪರ ಪತುಮ್ ನಿಸಂಕ (52) ಮತ್ತು ಕುಶಲ್ ಮೆಂಡಿಸ್ (57) ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಜಯದ ಹಾದಿಯನ್ನು ಸುಲಭವಾಗಿಸಿದ್ದು ಸ್ಲಾಗ್ ಓವರ್ಗಳಲ್ಲಿ ಭಾನುಕ ರಾಜಪಕ್ಸ (ಅಜೇಯ 25) ಮತ್ತು ಕ್ಯಾಪ್ಟನ್ ದಸುನ್ ಶನಕ (ಅಜೇಯ 33) ಸಿಡಿದೆದ್ದು ಶ್ರೀಲಂಕಾಕ್ಕೆ ಜಯತಂದರು.